Ashwaveega News 24×7 ನವೆಂಬರ್. 11: ಬಿಗಿ ಭದ್ರತಾ ವಲಯವಾಗಿರುವ ‘ದೆಹಲಿಯ ಕೆಂಪು ಕೋಟೆ’ ಮೆಟ್ರೋ ನಿಲ್ದಾಣದ ಬಳಿ ಕಾರೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದಾಗಿ 9 ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಲ್ಎನ್ಜಿಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಈ ಸ್ಟೋಟಕ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ.
ಸೋಮವಾರ(ನ.10) ಸಂಜೆ ಸುಮಾರು 6:55ಕ್ಕೆ ಕೆಂಪು ಕೋಟೆ ಲಾ ಕಿಲಾ ಮೆಟ್ರೊ ನಿಲ್ದಾಣ ಗೇಟ್ ಸಂಖ್ಯೆ 1ರ ಚಾಂದನಿ ಚೌಕ್ನ ಲಾಲ್ ಕಿಲಾ ಬಳಿ ನಿಂತಿದ್ದ ಕಾರಿನಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹಲವರ ದೇಹಗಳು ಗುರುತು ಸಿಗದಂತೆ ಛಿದ್ರಗೊಂಡಿವೆ. ಈವರೆಗೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಇಪ್ಪತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಮಾನ್ಯವಾಗಿ ಕೆಂಪು ಕೋಟೆ ಪ್ರದೇಶದಲ್ಲಿ ಸಂಜೆಯ ಸಮಯ ಪ್ರವಾಸಿಗರು ಹೆಚ್ಚಿರುತ್ತಾರೆ. ಸ್ಥಳೀಯರಿಂದ ಜನದಟ್ಟಣೆಯಿಂದ ಕೂಡಿರುತ್ತದೆ. ಸ್ಫೋಟ ಸಂಭವಿಸಿದಾಗಲೂ ಸ್ಥಳದಲ್ಲಿ ದೊಡ್ಡ ಜನಸಮೂಹವೇ ನೆರೆದಿತ್ತು, ಇದರಿಂದಾಗಿ ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಾರು ಸ್ಫೋಟಗೊಂಡ ಮಾಹಿತಿ ತಿಳಿಯುತ್ತಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ತ್ವರಿತವಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಸದ್ಯ ನಗರದಾದ್ಯಂತ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
