Ashwaveega News 24×7 ಡಿಸೆಂಬರ್. 07: ಉತ್ತರ ಗೋವಾದ ಅರ್ಪೋರಾದಲ್ಲಿನ ನೈಟ್ಕ್ಲಬ್ನ ಡ್ಯಾನ್ಸ್ ಫ್ಲೋರ್ನಲ್ಲಿ ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಆ ಮಹಡಿಯಲ್ಲಿ ನೂರಾರು ಜನರಿದ್ದರು. ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರಲ್ಲಿ ಕೆಲವರು ಸಿಬ್ಬಂದಿ ಜೊತೆಗೆ ಕೆಳಗಡೆ ಇದ್ದ ಅಡುಗೆ ಮನೆಗೆ ಓಡಿ ಹೋದರು.
ಅಲ್ಲಿದ್ದ ಸಿಬ್ಬಂದಿ ಜೊತೆ ಅವರೂ ಸಿಲುಕಿಕೊಂಡರು ಎಂದು ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಶನಿವಾರ ಮಧ್ಯರಾತ್ರಿ ನಂತರ ಸಿಲಿಂಡರ್ ಸ್ಫೋಟದಿಂದಾಗಿ ನೈಟ್ಕ್ಲಬ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಪೊಲೀಸರು ತಿಳಿಸಿದರೆ, ಪ್ರವಾಸಿಗರು ನೃತ್ಯ ಮಾಡುತ್ತಿದ್ದ ಕ್ಲಬ್ನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೆಲವು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ರಾಜ್ಯ ರಾಜಧಾನಿ ಪಣಜಿಯಿಂದ 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದ ಜನಪ್ರಿಯ ಪಾರ್ಟಿ ಸ್ಥಳವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ಕ್ಲಬ್ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರಲ್ಲಿ ಹೆಚ್ಚಿನವರು ಕ್ಲಬ್ನ ಅಡುಗೆ ಸಿಬ್ಬಂದಿಯಾಗಿದ್ದು, ಅದರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಮೃತರಲ್ಲಿ ನಾಲ್ವರು ಪ್ರವಾಸಿಗರು ಇದ್ದರು. ರಾಜ್ಯದ ಪ್ರವಾಸಿ ಋತುವಿನ ಪ್ರಮುಖ ಸಂದರ್ಭದಲ್ಲಿಯೇ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ.
ನೈಟ್ಕ್ಲಬ್ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತೇವೆ. ಕ್ಲಬ್ ಆಡಳಿತ ಮಂಡಳಿ ಮತ್ತು ಸ್ಥಾಪನೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
