Ashwaveega News 24×7 ಮಾರ್ಚ್ 03– 2026 : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಂಡಿರುವ ನಡುವೆಯೇ ಇರಾನ್ ಜಗತ್ತಿಗೆ ಭಾರೀ ಶಾಕ್ ನೀಡಿದೆ. ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾದ Strait of Hormuz ಅನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಇರಾನ್ ಸರ್ಕಾರ ಘೋಷಿಸಿದೆ. ಈ ಘೋಷಣೆಯಿಂದ ಜಾಗತಿಕ ಇಂಧನ ಮಾರುಕಟ್ಟೆ ತಲ್ಲಣಗೊಂಡಿದೆ.
“ಹರ್ಮೂಜ್ ಜಲಸಂಧಿಗೆ ಯಾವುದೇ ನೌಕೆ ಬರಬಾರದು. ಆದೇಶ ಉಲ್ಲಂಘಿಸಿದರೆ ತೈಲನೌಕೆಗೆ ಬೆಂಕಿ ಹಚ್ಚಲಾಗುತ್ತದೆ” ಎಂಬ ಕಠಿಣ ಎಚ್ಚರಿಕೆಯನ್ನು ಇರಾನ್ ನೀಡಿದೆ. ಈ ಜಲಸಂಧಿಗೆ Islamic Revolutionary Guard Corps ಕಾವಲು ನಿಲ್ಲಿಸಲಾಗಿದೆ ಅಂತೆ .
ಹರ್ಮೂಜ್ ಜಲಸಂಧಿ ಮೂಲಕವೇ ಗಲ್ಫ್ ರಾಷ್ಟ್ರಗಳ ಬಹುಪಾಲು ಕಚ್ಚಾತೈಲ ಜಗತ್ತಿನ ವಿವಿಧ ದೇಶಗಳಿಗೆ ಸಾಗುತ್ತದೆ. ಜಾಗತಿಕ ತೈಲ ಸರಬರಾಜಿನ ಸುಮಾರು ಐದನೇ ಭಾಗ ಇದೇ ಮಾರ್ಗದ ಮೂಲಕ ಸಾಗುತ್ತದೆ ಎಂಬ ಅಂದಾಜು ಇದೆ . ಹೀಗಾಗಿ ಈ ಮಾರ್ಗ ಬಂದ್ ಆದ ಪರಿಣಾಮ ಗ್ಲೋಬಲ್ ಮಾರ್ಕೆಟ್ನಲ್ಲಿ ಕಚ್ಚಾತೈಲದ ಬೆಲೆ ಈಗಾಗಲೇ ಏರಿಕೆ ಕಂಡಿದೆ.
ಪ್ರಸ್ತುತ ಹರ್ಮೂಜ್ ಜಲಸಂಧಿ ದಾಟಲು 150ಕ್ಕೂ ಹೆಚ್ಚು ನೌಕೆಗಳು ಸರತಿ ಸಾಲಿನಲ್ಲಿ ನಿಂತಿವೆ ಎಂದು ತಿಳಿದುಬಂದಿದೆ. ಪೂರ್ವ ದಿಕ್ಕಿನಲ್ಲಿ ಮಾತ್ರ 60ಕ್ಕೂ ಹೆಚ್ಚು ಟ್ಯಾಂಕರ್ಗಳು ನಿಲುಗಡೆಯಾಗಿವೆ ಎನ್ನಲಾಗಿದೆ. ಸಾಗಣೆ ವ್ಯತ್ಯಯದಿಂದ ಇಂಧನ ಪೂರೈಕೆ ಸರಪಳಿ ಮೇಲೆ ಭಾರೀ ಒತ್ತಡ ಉಂಟಾಗಿದೆ.
ಈ ಬೆಳವಣಿಗೆ ಜಾಗತಿಕ ಆರ್ಥಿಕ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಅನೇಕ ರಾಷ್ಟ್ರಗಳು ತುರ್ತು ರಾಜತಾಂತ್ರಿಕ ಮಾತುಕತೆಗಳಿಗೆ ಮುಂದಾಗಿವೆ. ಮುಂದಿನ ಕೆಲ ದಿನಗಳು ಜಾಗತಿಕ ಇಂಧನ ಮಾರುಕಟ್ಟೆಗೆ ನಿರ್ಣಾಯಕವಾಗಲಿವೆ .
