Ashwaveega News 24×7 ಮಾರ್ಚ್ 03– 2026 : ಇಂದು ವಿಶ್ವದಾದ್ಯಂತ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದ್ದು, ಭಾರತದಲ್ಲೂ ಈ ಖಗೋಳ ವೈಚಿತ್ರ್ಯ ಭಾಗಶಃ ಗೋಚರವಾಗಲಿದೆ. ಖಗೋಳ ಶಾಸ್ತ್ರಜ್ಞರ ಪ್ರಕಾರ, ಗ್ರಹಣ ಆರಂಭ ಸಮಯ ಬೆಳಿಗ್ಗೆ 4.34ಕ್ಕೆ ಆಗಿದ್ದು, ಗ್ರಹಣ ಅಂತ್ಯಕಾಲ 6.46 ರವರೆಗೆ ಮುಂದುವರಿಯಲಿದೆ.
ಭಾರತದಲ್ಲಿ ಸುಮಾರು 20 ನಿಮಿಷಗಳ ಕಾಲ ಮಾತ್ರ ಈ ಚಂದ್ರಗ್ರಹಣ ಗೋಚರವಾಗಲಿದೆ. ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಗ್ರಹಣದ ದೃಶ್ಯವನ್ನು ಜನರು ವೀಕ್ಷಿಸುವ ಸಾಧ್ಯತೆ ಇದೆ. ಹವಾಮಾನ ಅನುಕೂಲಕರವಾಗಿದ್ದರೆ, ಆಕಾಶ ಸ್ಪಷ್ಟವಾಗಿರುವ ಪ್ರದೇಶಗಳಲ್ಲಿ ಚಂದ್ರನ ಮೇಲೆ ನೆರಳು ಬೀಳುವ ದೃಶ್ಯ ಕಾಣಿಸಲಿದೆ.
ಹೋಳಿ ಹುಣ್ಣಿಮೆಯ ದಿನವೇ ಈ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಿರುವುದು ವಿಶೇಷವೆಂದು ಪರಿಗಣಿಸಲಾಗಿದೆ. ಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಸ್ಥಾನಗಳಲ್ಲಿ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ . ಗ್ರಹಣ ಅವಧಿಯಲ್ಲಿ ದೇವಾಲಯಗಳ ಬಾಗಿಲು ಮುಚ್ಚಿ, ಚಂದ್ರಗ್ರಹಣ ಅಂತ್ಯದ ಬಳಿಕ ಶುದ್ಧೀಕರಣ ಪೂಜೆ ಹಾಗೂ ವಿಶೇಷ ಆರಾಧನೆಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ, ವೈಜ್ಞಾನಿಕವಾಗಿ ಅಪರೂಪದ ಈ ಖಗೋಳ ಘಟನೆಯನ್ನು ಕಣ್ತುಂಬಿಕೊಳ್ಳಲು ಜನರಲ್ಲಿ ಉತ್ಸಾಹ ಮನೆ ಮಾಡಿದ್ದು, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿ ವಿಶೇಷ ಪೂಜೆ-ಪರಿಹಾರಗಳಿಗೂ ಸಿದ್ಧತೆ ನಡೆದಿದೆ.
