Ashwaveega News 24×7 ಸೆ. 09: ಮಂಡ್ಯದ ಮದ್ದೂರಿನಲ್ಲಿ ಗಣೇಶ ಆಚರಣೆ ವೇಳೆ ಅಹಿತಕರ ಘಟನೆ ನಡೆದಿದೆ. ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಮದ್ದೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ.
ಇದು ಶಾಂತಿಪ್ರಿಯನಾಗಿರೋ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಉದ್ವಿಗ್ನ ಪರಿಸ್ಥಿತಿ ಸಂಭವಿಸಿದೆ. ಶಾಂತವಾಗಿದ್ದ ಮದ್ದೂರಲ್ಲಿ ಕಿಡಿಗೇಡಿಗಳು ದ್ವೇಷದ ಕಿಡಿ ಹೊತ್ತಿಸಿದ್ದಾರೆ. ಮದ್ದೂರಲ್ಲಿ ಗಣೇಶ ಮೆರವಣಿಗೆ ಸಮಯದಲ್ಲಿ ಕಲ್ಲು ತೂರಾಟ ಮಾಡಿ ಕಿಡಿಗೇಡಿಗಳ ದುಷ್ಕೃತ್ಯದಿಂದ ಇಡೀ ಪಟ್ಟಣವೇ ಉದ್ವಿಗ್ನಗೊಂಡಿದೆ.
ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ಗಣೇಶನನ್ನ ಕೂರಿಸಲಾಗಿತ್ತು. ಸೆ.7 ರ ಸಂಜೆಯಿಂದ ಗಣೇಶ ವಿಸರ್ಜನಾ ಮೆರವಣಿಗೆಯನ್ನ ಹಮ್ಮಿಕೊಳ್ಳಲಾಗಿತ್ತು. ಹೀಗೆ ಗಣೇಶ ವಿಸರ್ಜನಾ ಮೆರವಣಿಗೆ ಮುಂದೆ ಸಾಗಿ ಬರ್ತಿದ್ದಂತೆ ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆದಿದೆ. ಕಿಡಿಗೇಡಿಗಳು ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಿ ನೀಚತನ ತೋರಿದ್ದಾರೆ. ಇದನ್ನ ಕಂಡ ಗಣೇಶ ಪ್ರತಿಷ್ಠಾಪಿಸಿದ ಯುವಕರ ಗುಂಪು ಕೂಡಾ ಕುಪಿತಗೊಂಡಿತ್ತು. ಈ ವೇಳೆ ಮದ್ದೂರು ಪಟ್ಟಣ ಅರ್ಧಗಂಟೆಗೂ ಹೆಚ್ಚು ಕಾಲ ಉದ್ವಿಗ್ನಗೊಂಡಿತ್ತು.
ಇನ್ನೂ ಕಲ್ಲು ತೂರಾಟ ನಡೀತಿದ್ದಂತೆ ಎರಡು ಗುಂಪಗಳ ನಡುವೆ ಗಲಾಟೆ ಜೋರಾಗಿತ್ತು. ಅಲ್ಲದೇ ಮೆರವಣಿಗೆಯಲ್ಲಿ ಭಾಗಿಯಾದವರೂ ಕಲ್ಲು ತೂರಾಟ ಮಾಡಿದ್ರು. ವಾತಾವರಣ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಫುಲ್ ಅಲರ್ಟ್ ಆಗಿದ್ರು. ಎರಡು ಗುಂಪನ್ನು ತಕ್ಷಣವೇ ಚದುರಿಸಿ ಓಡಿಸಿದರು. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಬಳಿಕ ಗಣೇಶ ವಿಸರ್ಜನೆಗೆ ಪೊಲೀಸರು ಅನುವು ಮಾಡಿಕೊಟ್ಟರು. ಅಲ್ಲದೇ ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಕೂಡ ಭೇಟಿ ನೀಡಿ ಘಟನೆಯ ಮಾಹಿತಿ ಸಂಗ್ರಹಿಸಿದರು.
ಸದ್ಯ ಮದ್ದೂರು ಪಟ್ಟಣ ಬೂದಿ ಮುಚ್ಚಿದ ಕೆಂಡದಂತಿದೆ. ಆದ್ರೆ, ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಿದ ಧರ್ಮಾಂಧರ ಹೆಡೆಮುರಿ ಕಟ್ಟಬೇಕಿದೆ.
