Ashwaveega News 24×7 ಫೆಬ್ರವರಿ 21 – 2026 ಬೆಂಗಳೂರು : ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನೊಂದಿಗೆ ಮೂಡಿ ಬಂದಿರುವ ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ವೆಬ್ ಸರಣಿ ‘ರಾಕ್ಷಸ’ ಇದೇ ತಿಂಗಳ 20ರಿಂದ ZEE 5ನಲ್ಲಿ ಪ್ರಸಾರವಾಗಲಿದೆ. 22 ರಿಂದ 25 ನಿಮಿಷಗಳ ಅವಧಿಯ ಏಳು ಎಪಿಸೋಡ್ಗಳ ಸರಣಿಯಾಗಿ ಇದು ಬಿಡುಗಡೆಯಾಗುತ್ತಿದೆ.
ನಟ ವಿಜಯ ರಾಘವೇಂದ್ರ ಅವರ ಚೊಚ್ಚಲ ವೆಬ್ ಸರಣಿ ಇದಾಗಿದ್ದು, ಮಲಪ್ರಭಾ ನದಿ ತೀರದಲ್ಲಿ ನಡೆಯುವ ನಿಗೂಢ ಮೊಸಳೆ ದಾಳಿಗಳ ಸುತ್ತ ಕಥೆ ಹೆಣೆದಿದೆ. ಉತ್ತರ ಕರ್ನಾಟಕದ ಜನಜೀವನ, ಸಂಸ್ಕೃತಿ ಹಾಗೂ ಮನೋವೈಜ್ಞಾನಿಕ ಅಂಶಗಳನ್ನು ಒಳಗೊಂಡಿರುವ ಈ ಸರಣಿ ಗ್ರಾಮೀಣ ಭಾಗದ ಮೊದಲ ವೆಬ್ ಪ್ರಯತ್ನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಂಗಳೂರು ನಗರದ ಎಸ್ಆರ್ವಿ ಥಿಯೇಟರ್ನಲ್ಲಿ ನಿನ್ನೆ ‘ರಾಕ್ಷಸ’ ಪ್ರೀಮಿಯರ್ ಶೋ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಈ ವೇಳೆ ದೀಪಕ್ ತಿಮ್ಮಯ್ಯ ಮಾತನಾಡಿ, “ZEE5 ಕನ್ನಡದಲ್ಲಿ ವೆಬ್ ಸರಣಿಗಳ ಪ್ರಯಾಣ ಆರಂಭಿಸಿದಾಗಿನಿಂದಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶೃತಿ ನಾಯ್ಡು ಪ್ರೊಡಕ್ಷನ್, ಪಿಆರ್ಕೆ, ಕೆಆರ್ಜಿ ಬಳಿಕ ಈಗ ತರುಣ್ ಸುಧೀರ್ ಅವರ ತಂಡವೂ ಕೈಜೋಡಿಸಿದೆ. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಕಲಿತಿದ್ದೇವೆ. ಮುಂದಿನ ದಿನಗಳಲ್ಲಿ ವಿವಿಧ ಜಾನರ್ಗಳಲ್ಲಿ ಸರಣಿಗಳು, ನಾನ್-ಫಿಕ್ಷನ್ ಹಾಗೂ ಹೊಸ ಫಾರ್ಮ್ಯಾಟ್ಗಳನ್ನು ಪರಿಚಯಿಸುವ ಯೋಜನೆ ಇದೆ,” ಎಂದು ತಿಳಿಸಿದರು.
ಸರಣಿಯ ನಿರ್ಮಾಪಕರಾದ ತರುಣ್ ಸುಧೀರ್ ಮಾತನಾಡಿ, “ಸಿನಿಮಾ ಬಿಡುಗಡೆಯಾದಾಗ ಥಿಯೇಟರ್ನಲ್ಲಿ ಕಲೆಕ್ಷನ್ ಮುಖ್ಯ. ಆದರೆ ವೆಬ್ ಸರಣಿಗೆ ಪ್ಲಾಟ್ಫಾರ್ಮ್ ಬೆಂಬಲ ಅತ್ಯಗತ್ಯ. ಆ ಬೆಂಬಲದಿಂದಲೇ ಇಂಡಸ್ಟ್ರಿ ಬೆಳೆಯುತ್ತದೆ. ZEE5 ಕನ್ನಡ ವೆಬ್ ಸರಣಿಗಳಿಗೆ ಬಲವಾದ ವೇದಿಕೆ ಒದಗಿಸಿದೆ. ಉತ್ತರ ಕರ್ನಾಟಕ ನಮ್ಮ ಕುಟುಂಬಕ್ಕೆ ವಿಶೇಷವಾದ ನೆಲ. ಆ ಪ್ರೀತಿಗೆ ಪ್ರತಿಯಾಗಿ ಈ ಕಥೆಯನ್ನು ನೀಡಿದ್ದೇವೆ,” ಎಂದರು.

‘ರಾಕ್ಷಸ’ ಸರಣಿಯಲ್ಲಿ ಒಟ್ಟು 89 ಪಾತ್ರಗಳು ಇದ್ದು, ಬಹುತೇಕ ಕಲಾವಿದರು ಉತ್ತರ ಕರ್ನಾಟಕ ಭಾಗದವರೇ ಆಗಿದ್ದಾರೆ .0
ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಶೈಲಿಯ ಈ ಸರಣಿಯಲ್ಲಿ ವಿಜಯ ರಾಘವೇಂದ್ರ, ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಹಾಗೂ ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆಯನ್ನು ಸುಹಾನ್ ಪ್ರಸಾದ್ ಮತ್ತು ಅಪೂರ್ವ ಒದಗಿಸಿದ್ದು, ನಿರ್ದೇಶನವನ್ನೂ ಸುಹಾನ್ ಪ್ರಸಾದ್ ಮಾಡಿದ್ದಾರೆ. ನಿರ್ಮಾಣವನ್ನು Tarun Sudhir Productions ಬ್ಯಾನರ್ ಅಡಿಯಲ್ಲಿ ತರುಣ್ ಸುಧೀರ್ ನಿರ್ವಹಿಸಿದ್ದಾರೆ.

ಉತ್ತರ ಕರ್ನಾಟಕದ ನೈಜ ಸೊಗಡಿನೊಂದಿಗೆ ಮನೋವೈಜ್ಞಾನಿಕ ತಿರುವುಗಳನ್ನು ಒಳಗೊಂಡ ‘ರಾಕ್ಷಸ’ ಸರಣಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, OTT ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.
