Ashwaveega News 24×7 ಫೆಬ್ರವರಿ 20 – 2026 : ಮೈಸೂರು ಮೂಲದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಡಿಸಿಪಿ Khasim ಮಹತ್ವದ ಮಾಹಿತಿ ನೀಡಿದ್ದಾರೆ .
“18 ರಂದು ನಟೇಶ್ ಎಂಬವರು ದೂರು ನೀಡಿದ್ದಾರೆ. ಆ ದೂರಿನ ಅನ್ವಯ ಪ್ರಾಥಮಿಕ ವಿಚಾರಣೆ ನಡೆಸಲಾಗಿದೆ. ದೂರಿನಲ್ಲಿ ಉಲ್ಲೇಖಿಸಿರುವಂತೆ, ನಟೇಶ್ ಅವರ ಫೇಸ್ಬುಕ್ ಖಾತೆಯಿಂದ ಫೋಟೋ ಹಾಗೂ ದಾಖಲೆಗಳನ್ನು ಪಡೆದು ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಇದೆ. ಜೊತೆಗೆ ನಟೇಶ್ ಅವರ ಧ್ವನಿಯನ್ನು ನಕಲಿ ರೀತಿಯಲ್ಲಿ ಸೃಷ್ಟಿಸಲಾಗಿದೆ ಎಂಬ ವಿಷಯವೂ ಪರಿಶೀಲನೆಯಲ್ಲಿದೆ,” ಎಂದು ಡಿಸಿಪಿ ಖಾಸಿಂ ತಿಳಿಸಿದ್ದಾರೆ .
ದೂರಿನ ಆಧಾರದಲ್ಲಿ ಮೈಸೂರಿನಲ್ಲಿರುವ ಸ್ನೇಹಮಯಿ ಕೃಷ್ಣ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬಳಿಕ ಅವರನ್ನು ಬಂಧಿಸಿ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಸ್ನೇಹಮಯಿ ಕೃಷ್ಣ ವಿಚಾರಣೆ ಮುಂದುವರಿದಿದ್ದು, ವಿಚಾರಣೆ ವೇಳೆ ದೊರಕುವ ಹೇಳಿಕೆ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಡಿಸಿಪಿ ಸ್ಪಷ್ಟಪಡಿಸಿದ್ದಾರೆ.
