Ashwaveega News 24×7 ಮೇ 04 – 2026 : ಬಾಗಲಕೋಟೆ : ರಾಜ್ಯದ ಗಮನ ಸೆಳೆದಿರುವ ಬಾಗಲಕೋಟೆ ಉಪಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮತ್ತು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಡುವೆ ನೇರ ಪೈಪೋಟಿ ನಡೆಯುತ್ತಿದ್ದು, ಅಂತಿಮವಾಗಿ ಗೆಲುವಿನ ಮಾಲೆ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹಿರಿಯ ನಾಯಕ H.Y. ಮೇಟಿ ಅವರ ನಿಧನದ ಹಿನ್ನೆಲೆ ಏಪ್ರಿಲ್ 9ರಂದು ಈ ಉಪಚುನಾವಣೆ ನಡೆದಿತ್ತು. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲುವು ಸಾಧಿಸಲೇಬೇಕಾದ ಒತ್ತಡ ನಿರ್ಮಾಣವಾಗಿದೆ.
ಇನ್ನೊಂದೆಡೆ, ಉಮೇಶ್ ಮೇಟಿ ಅವರಿಗೆ ತಂದೆಯ ಸಾವಿನ ಅನುಕಂಪ ಮತಗಳು ಸಹಾಯವಾಗುತ್ತವೆಯೇ ಎಂಬ ಚರ್ಚೆ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಸ್ಥಳೀಯ ಬೆಂಬಲವನ್ನು ಪಡೆದು ಕಾಂಗ್ರೆಸ್ಗೆ ಸವಾಲು ಹಾಕುತ್ತಿದ್ದಾರೆ .
ಈ ಬಾರಿ 68.73% ಮತದಾನ ದಾಖಲಾಗಿದ್ದು, ಇದು ಯಾರ ಪಾಲಿಗೆ ವರವಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಒಟ್ಟು 1,78,273 ಮತದಾರರು ತಮ್ಮ ಮತ ಚಲಾಯಿಸಿದ್ದು, ಅವರ ತೀರ್ಪು ಬಹಿರಂಗವಾಗಲು ಕ್ಷಣಗಣನೆ ಆರಂಭವಾಗಿದೆ.
ಮತ ಎಣಿಕೆ ಪ್ರಕ್ರಿಯೆ ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಒಟ್ಟು 14 ಟೇಬಲ್ಗಳಲ್ಲಿ 23 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದ್ದು, ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದೆ. ಜೊತೆಗೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಮದ್ಯ ಮಾರಾಟಕ್ಕೂ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಇಡೀ ರಾಜ್ಯದ ಕಣ್ಣು ಈಗ ಬಾಗಲಕೋಟೆ ಉಪಚುನಾವಣೆಯ ಫಲಿತಾಂಶದತ್ತ ನೆಟ್ಟಿದ್ದು, ಶೀಘ್ರದಲ್ಲೇ ಜನಾದೇಶ ಸ್ಪಷ್ಟವಾಗಲಿದೆ .
