Ashwaveega News 24×7 ಫೆಬ್ರವರಿ 23 – 2026 ಬೆಳಗಾವಿ : ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರ ನಿದ್ದೆಗೆಡಿಸಿದೆ. ಬಸವ ಕಾಲೋನಿ ಸೇರಿದಂತೆ ಹಲವೆಡೆ ಬೀದಿನಾಯಿಗಳ ಸಂಖ್ಯೆ ಏರಿಕೆಯಾಗಿರುವುದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ನಿರಂತರವಾಗಿ ಶಾಲಾ ಮಕ್ಕಳು ಹಾಗೂ ಪಾದಚಾರಿಗಳ ಮೇಲೆ ಬೀದಿನಾಯಿಗಳು ದಾಳಿ ನಡೆಸುತ್ತಿರುವ ಘಟನೆಗಳು ವರದಿಯಾಗುತ್ತಿವೆ . ವಿಶೇಷವಾಗಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಮಕ್ಕಳ ಮೇಲೆ ದಾಳಿ ಹೆಚ್ಚಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ರಸ್ತೆ ಮಧ್ಯೆ ಆಹಾರ ಹಾಕಬೇಡಿ ಎಂದು ಮನವಿ ಮಾಡಿದ್ದರೂ , ಕೆಲವರು ಬೀದಿನಾಯಿಗಳಿಗೆ ಆಹಾರ ನೀಡುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ . ಇದರಿಂದ ನಾಯಿಗಳು ಒಂದು ಪ್ರದೇಶದಲ್ಲೇ ಗುಂಪುಗೂಡಿ ಸಾರ್ವಜನಿಕರಿಗೆ ಭೀತಿ ಉಂಟುಮಾಡುತ್ತಿವೆ .
ಈ ಕುರಿತು Belagavi City Corporation ಗಮನಕ್ಕೆ ತಂದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿನಾಯಿಗಳ ನಿಯಂತ್ರಣಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು , ಸ್ಟೆರಿಲೈಸೇಶನ್ ಹಾಗೂ ಪುನರ್ವಸತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ತೀವ್ರವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
