Ashwaveega News 24×7 ಮಾರ್ಚ್ 05 – 2026 : ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆ ಇದೀಗ ಭಾರತದ ಸಮೀಪದ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಿದೆ. ಅಮೆರಿಕದ ನೌಕಾಪಡೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇರಾನ್ ನೌಕೆಯೊಂದು ಭಾರೀ ಸ್ಫೋಟಗೊಂಡು ಧ್ವಂಸಗೊಂಡಿದೆ ಎಂದು ವರದಿಯಾಗಿದೆ. ಈ ನೌಕೆ ಭಾರತದಿಂದ ವಾಪಸ್ ಆಗುತ್ತಿದ್ದ ವೇಳೆ ದಾಳಿ ನಡೆದಿದ್ದು, ಸುಮಾರು 87ಕ್ಕೂ ಹೆಚ್ಚು ಇರಾನ್ ಸೈನಿಕರು ಸಮುದ್ರದಲ್ಲಿ ಜಲಸಮಾಧಿಯಾಗಿರುವುದಾಗಿ ಮೂಲಗಳು ತಿಳಿಸಿವೆ.
ಶ್ರೀಲಂಕಾದ ಗಾಲ್ ಬಂದರಿನಿಂದ ಸುಮಾರು 44 ನಾಟಿಕಲ್ ಮೈಲಿ ದೂರದಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಅಮೆರಿಕದ ಸಬ್ಮರೀನ್ ನೌಕೆಯಿಂದ ಕ್ಷಿಪಣಿ ಹೊಡೆದ ಪರಿಣಾಮ ಇರಾನ್ ನೌಕೆ ಢಂ.. ಢಂ.. ಢಮಾರ್ ಎಂದು ಸ್ಫೋಟಗೊಂಡು ಸಮುದ್ರದಲ್ಲಿ ಮುಳುಗಿದ ಘಟನೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆ ನಂತರ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದ್ದು, ಹಿಂದೂ ಮಹಾಸಾಗರದ ಪ್ರಮುಖ ಸಮುದ್ರ ಮಾರ್ಗಗಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಗಾಯಗೊಂಡಿರುವ ಕೆಲವು ಇರಾನ್ ಸೈನಿಕರಿಗೆ ಶ್ರೀಲಂಕಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೊಂದೆಡೆ ಇರಾನ್ ರಾಜಧಾನಿ ಟೆಹ್ರಾನ್ ಮೇಲೆಯೂ ಭಾರೀ ದಾಳಿ ನಡೆದಿರುವ ವರದಿಗಳು ಹೊರಬಂದಿವೆ. ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಕ್ಷಿಪಣಿಗಳ ಸುರಿಮಳೆಯನ್ನೇ ಸುರಿಸಿರುವುದಾಗಿ ತಿಳಿದುಬಂದಿದೆ. ಕುರ್ದಿಶ್ ಪ್ರಾಂತ್ಯದ ಸನಂದಾಜ್, ಸಕ್ವೆಜ್ ಮತ್ತು ಬುಕ್ಾನ್ ನಗರಗಳಲ್ಲಿಯೂ ಸ್ಫೋಟಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ.
ಟೆಹ್ರಾನ್ ನಗರದ ಹಲವೆಡೆ ಭಾರೀ ಸ್ಫೋಟಗಳ ಶಬ್ದ ಕೇಳಿಬಂದಿದ್ದು, ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಗಳ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಮತ್ತಷ್ಟು ಗಟ್ಟಿಯಾಗಿದ್ದು, ಜಾಗತಿಕ ಶಾಂತಿ ಹಾಗೂ ವ್ಯಾಪಾರ ಮಾರ್ಗಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ .
