
Bike taxi crackdown begins today
ಸಿಲಿಕಾನ್ ಸಿಟಿಯ ಗಲ್ಲಿ-ಗಲ್ಲಿಗಳಲ್ಲಿ, ಸಂದಿ-ಗೊಂದಿಗಳಲ್ಲಿ ಜನರ ಪಿಕಪ್ ಮಾಡ್ತಾ ಬಿರುಸಿನಿಂದ ಓಡಾಡ್ತಿದ್ದ ಬೈಕ್ ಟ್ಯಾಕ್ಸಿ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಹೈಕೋರ್ಟ್ ಆದೇಶದಂತೆ ಬೈಕ್ ಟ್ಯಾಕ್ಸಿಗಳನ್ನ ಬಂದ್ ಮಾಡಲಾಗಿದ್ದು, ಅಪ್ಪಿ-ತಪ್ಪಿ ಕೂಡ ಓಡಾಡುವಂತಿಲ್ಲ. ಬೈಕ್ ಟ್ಯಾಕ್ಸಿಗಳ ವಿರುದ್ಧ ಆಟೋ ಮತ್ತು ಕ್ಯಾಬ್ ಚಾಲಕರು ಆಕ್ರೋಶ ಹೊರಹಾಕಿದ್ರು. ಬೈಕ್ ಟ್ಯಾಕ್ಸಿ ಸವಾರರ ಮೇಲೆ ಹಲ್ಲೆ ಸಹ ನಡೆದಿತ್ತು. ಆಟೋಗಳ ವ್ಯಾಪಾರ ಡಲ್ ಆಗಿತ್ತು. 2021ರಲ್ಲಿ ಆರಂಭವಾಗಿದ್ದ ಬೈಕ್ ಟ್ಯಾಕ್ಸಿಗೆ ಇದೀಗ ಹೈಕೋರ್ಟ್ ಬ್ರೇಕ್ ಹಾಕಿದೆ. ಕಡಿಮೆ ದರದಲ್ಲಿ ಜನರನ್ನು ಸ್ಥಳ ತಲುಪಿಸುತ್ತಿದ್ದ ಬೈಕ್ ಸವಾರರ ಮೇಲೆ ಕೆಲ ಆರೋಪಗಳು ಕೂಡ ಕೇಳಿ ಬಂದಿತ್ತು.
ಕಳೆದ ಏಪ್ರಿಲ್ 2 ರಂದು ನ್ಯಾಯಾಲಯ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನ 6 ವಾರಗಳ ಒಳಗೆ ನಿಲ್ಲಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ನ್ಯಾಯಾಲಯ ನೀಡಿದ್ದ 6 ವಾರಗಳ ಗಡುವು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿತ್ತು. ರಾಪಿಡೋ, ಓಲಾ ಮತ್ತು ಉಬರ್ ಸೇರಿದಂತೆ ಬೈಕ್ ಟ್ಯಾಕ್ಸಿ ನಿರ್ವಾಹಕರು ಆದೇಶ ವಿಸ್ತರಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ರು.
ಕೊಟ್ಟ ಗಡುವು ಕೂಡ ಜೂನ್ 15ಕ್ಕೆ ಮುಗಿದಿದೆ. ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಮಧ್ಯಂತರ ಅನುಮತಿ ನೀಡಲು ಕೂಡ ನಿರಾಕರಿಸಲಾಗಿದೆ. ಬೈಕ್ ಟ್ಯಾಕ್ಸಿಗಳಿಗೆ ಹೊಸ ನಿಯಮಗಳನ್ನು ರೂಪಿಸದ ಕಾರಣ ಮತ್ತೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆಯನ್ನು ಜೂನ್ 24ಕ್ಕೆ ನಿಗದಿಪಡಿಸಲಾಗಿದೆ.
ಇನ್ನು ಈ ಬೆನ್ನಲ್ಲೇ ‘ನಮ್ಮ ಬೈಕ್ ಟ್ಯಾಕ್ಸಿ ಅಸೋಸಿಯೇಷನ್’ ಅಧ್ಯಕ್ಷ ಮೊಹಮ್ಮದ್ ಸಲೀಂ ಎಂಬುವವರು ಬ್ಯಾನ್ ಆದೇಶ ಹಿಂಪಡೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.