Ashwaveega News 24×7 ಮಾರ್ಚ್ 04 – 2026 : ಜೈಲಿನಲ್ಲಿ ಇರುವ ಡಿ ಗ್ಯಾಂಗ್ ಮತ್ತೆ ಕಾನೂನು ತಂತ್ರಕ್ಕೆ ಕೈ ಹಾಕಿದೆ. ಪ್ರತಿನಿತ್ಯ ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದ ಆರೋಪಿಗಳು, ಇದೀಗ ಮತ್ತೊಂದು ಹೊಸ ಮನವಿ ಮಾಡಿ ಸೆಷನ್ಸ್ ಕೋರ್ಟ್ಗೆ ಮೊರೆ ಹೋಗಿದ್ದಾರೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ Darshan ಸೇರಿದಂತೆ ಆರೋಪಿಗಳ ಗ್ಯಾಂಗ್, “ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಬೇಡ. ನಮ್ಮನ್ನ ಖುದ್ದಾಗಿ ಕೋರ್ಟ್ಗೆ ಕರೆದುಕೊಂಡು ಬರಲಿ” ಎಂದು ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಪ್ರತಿನಿತ್ಯ ಟ್ರಯಲ್ ನಡೆದರೆ ದಿನವೂ ಕೋರ್ಟ್ಗೆ ಹೊರಬರಲು ಅವಕಾಶ ಸಿಗುತ್ತದೆ ಎಂಬ ಕಾರಣದಿಂದಲೇ ಈ ಮನವಿ ಸಲ್ಲಿಸಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಜೈಲಿನೊಳಗಿನ ಪರಿಸ್ಥಿತಿ, ಹೆಚ್ಚುತ್ತಿರುವ ಬಿಸಿಲು ಸೇರಿದಂತೆ ಹಲವು ಕಾರಣಗಳನ್ನು ಉಲ್ಲೇಖಿಸಿ ಆರೋಪಿಗಳು ಕೋರ್ಟ್ಗೆ ಮನವಿ ಮಾಡಿದ್ದಾರೆ .
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಲು ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್ಪಿಪಿ) ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಪ್ರತಿನಿತ್ಯ ಕೇಸ್ ಟ್ರಯಲ್ ಮಾಡಬಾರದು ಎಂದು ವಾದಿಸಿರುವ ಎಸ್ಪಿಪಿ, “ಯಾವ ಕಾರಣಕ್ಕೂ ದರ್ಶನ್ ಸೇರಿದಂತೆ ಆರೋಪಿಗಳನ್ನು ಪ್ರತಿದಿನ ಕೋರ್ಟ್ಗೆ ಹಾಜರುಪಡಿಸುವ ಅಗತ್ಯವಿಲ್ಲ” ಎಂದು ಪ್ರಬಲ ವಾದ ಮಂಡಿಸಲು ಸಜ್ಜಾಗಿದ್ದಾರೆ.
ಕೋರ್ಟ್ ಎದುರು ಆರೋಪಿಗಳ ಮನವಿ, ಎಸ್ಪಿಪಿ ಆಕ್ಷೇಪ – ಈ ಮಧ್ಯೆ ಪ್ರಕರಣ ಮತ್ತೊಂದು ಕಾನೂನು ತಿರುವು ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಒಟ್ಟಿನಲ್ಲಿ, ಡಿ ಗ್ಯಾಂಗ್ ಸಲ್ಲಿಸಿರುವ ಈ ಹೊಸ ಅರ್ಜಿ ಪ್ರಕರಣದ ಮುಂದಿನ ಹಂತದಲ್ಲಿ ಮಹತ್ವದ ಬೆಳವಣಿಗೆಯಾಗಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.
