Ashwaveega News 24×7 ನವೆಂಬರ್. 29: ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇಂದು 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯಾ ನಟಿ ಮಾತ್ರವಲ್ಲದೆ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. 2003ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು, ನಂತರ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ಮಿಂಚಿದರು.

ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ ಆನ್ ಪಟ್ಟದಲ್ಲಿದ್ದ ರಮ್ಯಾ, ಸುದೀಪ್, ದರ್ಶನ್, ಪುನೀತ್ ರಾಜ್ಕುಮಾರ್ ಹಾಗೂ ಯಶ್ ಸೇರಿದಂತೆ ಬಹುತೇಕ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ, ಆರೇಳು ವರ್ಷದಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ.
ಮೂಲತಃ ಬೆಂಗಳೂರಿನವರಾದ ನಟಿ ರಮ್ಯಾ ಅವರ ಮೊದಲ ಹೆಸರು ದಿವ್ಯ ಸ್ಪಂದನ. ಕನ್ನಡದ ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರು ದಿವ್ಯ ಸ್ಪಂದನ ಅವರಿಗೆ ಅಭಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿ, ಈ ಚಿತ್ರದಲ್ಲಿ ಅವರ ಹೆಸರನ್ನು ರಮ್ಯ ಎಂದು ಬದಲಾಯಿಸಿದರು.

ಮೋಹಕ ತಾರೆ ರಮ್ಯಾ ಅವರ ಮೊದಲ ಸಿನಿಮಾ ಅಭಿ. 2003ರಲ್ಲಿ ತೆರೆಕಂಡ ಅಭಿ ಸಿನಿಮಾ ಮೂಲಕ ರಮ್ಯಾ ಚಿತ್ರರಂಗ ಪ್ರವೇಶಿಸಿದರು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ರಮ್ಯಾ ನಟನೆಯ ಈ ಚಿತ್ರ ೧೫೦ ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಪೂರ್ಣಿಮಾ ಎಂಟರ್ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದರು. ಈ ಸಿನಿಮಾ ಮೂಲಕ ಪುನೀತ್ ಮತ್ತು ರಮ್ಯಾ ಜೋಡಿ ಹಿಟ್ ಆಗಿತ್ತು.

ಅಭಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಮ್ಯಾ, ನಂತರ ಅನೇಕ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆಗೆದ್ದರು. ರಮ್ಯಾ ಕೇವಲ ಗ್ಲಾಮರಸ್ ಗೊಂಬೆಯಾಗಿರಲಿಲ್ಲ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಿದ್ದರು.

ಮುಂದುವರೆದು ನಟಿ ರಮ್ಯಾ ನಟನೆಯಲ್ಲಿ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಸೇರಿದ್ದರು. 2012ರಲ್ಲಿ ರಮ್ಯಾ ಕಾಂಗ್ರೆಸ್ ಪಾರ್ಟಿ ಸೇರ್ಪಡೆ ಆಗಿದ್ದರು. 2013ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ರಮ್ಯಾ ಗೆಲುವು ಸಾಧಿಸಿದ್ದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧೆ ಮಾಡಿದರೂ ಗೆಲುವು ಅವರಿಗೆ ಒಲಿಯಲಿಲ್ಲ. 2017ರಲ್ಲಿ ಅವರಿಗೆ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ರಾಷ್ಟ್ರೀಯ ಮುಖ್ಯಸ್ಥರನ್ನಾಗಿ ಮಾಡಲಾಯಿತು.
2018ರಲ್ಲಿ ಅವರು ತಮ್ಮ ಸ್ಥಾನದಿಂದ ಕೆಳಗೆ ಇಳಿದಿದ್ದರು. ನಂತರ ರಮ್ಯಾ ರಾಜಕೀಯದಿಂದ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಿಂದಲೂ ದೂರ ಉಳಿದಿದ್ದರು. ನಂತರ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಾಸಾಗಿದ್ದರು.
