
komul board elections in kolar ky nanjegowda elected as president for third time
(ಅಶ್ವವೇಗ) Ashwaveega News 24×7 ಜು.05: ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) ಅಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ಮಾಲೂರಿನ ಕೆ.ವೈ. ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸತತ ಮೂರನೇ ಬಾರಿ ಅವರು ಈ ಸ್ಥಾನಕ್ಕೇರುತ್ತಿದ್ದಾರೆ.
ಕೋಮುಲ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಂಜೇಗೌಡ ಶನಿವಾರ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಕ್ಕೂಟದ 13 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಮಂದಿ ಜಯ ಸಾಧಿಸುವುದರೊಂದಿಗೆ ಕೋಮುಲ್ ‘ಕೈ’ ತೆಕ್ಕೆಗೆ ಜಾರಿತ್ತು. ಮಾಲೂರು ಟೇಕಲ್ ಕ್ಷೇತ್ರದಿಂದ ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದರು. ಜೆಡಿಎಸ್ – ಬಿಜೆಪಿ ಮೈತ್ರಿಕೂಟದ ನಾಲ್ವರು ನಿರ್ದೇಶಕರು ಮಾತ್ರ ಗೆದ್ದಿದ್ದರು.
ಬಂಗಾರಪೇಟೆ ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೂಡ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಕೆ.ಎಚ್. ಮುನಿಯಪ್ಪ ಬಣದ ಅವರು ಹಾಗೂ ಕೆ.ಆರ್. ರಮೇಶ್ ಕುಮಾರ್ ಬಣದ ನಂಜೇಗೌಡ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದ ಕಾರಣ ಜಿಲ್ಲಾ ಕಾಂಗ್ರೆಸ್ನಲ್ಲಿ ಜಟಾಪಟಿಯೇ ನಡೆದಿತ್ತು.
ಈ ಹಂತದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಸಂಧಾನ ಸೂತ್ರ ಏರ್ಪಟ್ಟಿತ್ತು. ನಂಜೇಗೌಡರನ್ನು ಕೋಮುಲ್ ಅಧ್ಯಕ್ಷರನ್ನಾಗಿ ಮಾಡಿ, ನಾರಾಯಣಸ್ವಾಮಿ ಅವರನ್ನು ಕೆಎಂಎಫ್ ಡೆಲಿಗೇಟ್ ಆಗಿ ನಿಯೋಜಿಸಲು ತೀರ್ಮಾನಿಸಲಾಗಿತ್ತು.
ನಿರ್ದೇಶಕರಾದ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಮಹಾಲಕ್ಷ್ಮಿ, ಜೆಡಿಎಸ್-ಬಿಜೆಪಿ ಬೆಂಬಲಿತ ನಿರ್ದೇಶಕರು ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಮಾಲೂರಿನ ಕೆ.ವೈ. ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸತತ ಮೂರನೇ ಬಾರಿ ಅವರು ಈ ಸ್ಥಾನಕ್ಕೇರುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ನಂಜೇಗೌಡ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.